ಸಂಯುಕ್ತಗಳು, ರಾಸಾಯನಿಕ

	ಎರಡು ಅಥವಾ ಹೆಚ್ಚು ಧಾತುಗಳ ರಾಸಾಯನಿಕಸಂಯೋಗದ ಉತ್ಪನ್ನಗಳು (ಕೆಮಿಕಲ್ ಕಾಂಪೌಂಡ್ಸ್). ಯಾವುದೇ ಸಂಯುಕ್ತದ ಘಟಕಧಾತುಗಳು ಯಾವಾಗಲೂ ತೂಕಶಃ ನಿರ್ದಿಷ್ಟ ಪ್ರಮಾಣದಲ್ಲಿರುತ್ತವೆ (ಉದಾ: ನೀರಿನಲ್ಲಿ ಹೈಡ್ರೊಜನ್ ಮತ್ತು ಆಕ್ಸಿಜನ್ ಪ್ರಮಾಣ 1:8, ಅಡುಗೆ ಉಪ್ಪಿನಲ್ಲಿ ಸೋಡಿಯಮ್ ಮತ್ತು ಕ್ಲೋರೀನ್ ಪ್ರಮಾಣ 23: 35.5). ಸಂಯುಕ್ತದ ಗುಣಗಳು ಘಟಕಧಾತುಗಳದ್ದಕ್ಕಿಂತ ಭಿನ್ನವಾಗಿರುತ್ತವೆ (ಉದಾ: ಹೈಡ್ರೊಜನ್ ದಹ್ಯ ಅನಿಲ, ಆಕ್ಸಿಜನ್ ದಹನಾನುಕೂಲೀ ಅನಿಲ, ನೀರು ದಹನವಿರೋಧೀ ದ್ರವ. ಕ್ಲೋರೀನ್ ಹಸುರು ವಿಷಾನಿಲ, ಸೋಡಿಯಮ್ ನೀರಿನೊಂದಿಗೆ ಪ್ರಬಲವಾಗಿ ವರ್ತಿಸುವ ಬೆಳ್ಳಿಬಿಳುಪಿನ ಮೃದು ಲೋಹಧಾತು, ಉಪ್ಪು ಬಣ್ಣವಿಲ್ಲದ ಸ್ಫಟಿಕೀಯ ಖಾದ್ಯ ಪದಾರ್ಥ). ಸಂಯುಕ್ತದ ಘಟಕಧಾತುಗಳನ್ನು ರಾಸಾಯನಿಕ ಕ್ರಿಯೆ ಮುಖೇನ  ಮಾತ್ರ ಪ್ರತ್ಯೇಕಿಸಬಹುದೇ ವಿನಾ ಕೇವಲ ಭೌತವಿಧಾನಗಳಿಂದಲ್ಲ. ಎರಡು ಅಥವಾ ಹೆಚ್ಚು ಧಾತು ಹಾಗೂ ಸಂಯುಕ್ತಗಳ ಮಿಶ್ರಣದಲ್ಲಿ ಈ ಯಾವುವೇ ಗುಣಗಳಿರುವುದಿಲ್ಲ. ಎಂದೇ, ಸಂಯುಕ್ತಗಳನ್ನು ಮಿಶ್ರಣಗಳಿಂದ ವಿಭೇದೀಕರಿಸುವುದು ಸುಲಭ. 
												(ಎಚ್.ಜಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ